Saturday, 28 January 2012

ಬಾಳ ದಾರಿಯಲಿ ಏನೆ ಆದರೂ ಚಂದಿರ ಬರುವನು ನಮ್ಮಜೊತೆ(2)


ಮಾತಿನಿಂದ ಕೂಡಿದ ಸಂಭಾಷಣೆ ಒಂಥರಾ ಆದರೆ, ಮೌನ ಸಂಭಾಷಣೆ
ಮಾತಾಡದೇನೆ ಎಲ್ಲವನ್ನೂ ಮತ್ತೊಬ್ಬರಿಗೆ ತಿಳಿಸುವ ವೈಶಿಷ್ಟ್ಯತೆ .ಆದರೆ ಅಂತಹ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ್ಮೀಯರಿದ್ದಾಗಲೇ ಅದು ಸಫಲ , ಸಾರ್ಥಕ.
Silent conversation ಅಂತ ಚಂದ್ರನ ಬಗ್ಗೆ ಹೇಳಿದ್ದು ಯಾಕೆ ಅಂದ್ರೆ, ಅಂದು ನನ್ನಲ್ಲಿ ಆಗ್ತಿದ್ದ ಭಾವಗಳ ಅಲ್ಲೋಲ ಕಲ್ಲೋಲ ಎಲ್ಲವನ್ನೂ ಆತ್ಮೀಯನಂತೆ ಆಲಿಸುತ್ತ , ನನ್ನ ಮೂಕ ವೇದನೆಗೆ ಮೌನವಾಗಿಯೇ ಸಾಂತ್ವಾನ ಹೇಳುತ್ತ ನೋಡುತ್ತಿದ್ದ ಚಂದ್ರ…

ಅಂದು ನನ್ನ “ಆಪ್ತ ಗೆಳತಿ”, ಐಟಿ ಕಂಪನಿಯಲ್ಲಿ ತನ್ನ career ಶುರು ಮಾಡಲು ಹೊರಟ ದಿನ. ತರಬೇತಿಗಾಗಿ ಮೂರು ತಿಂಗಳು ಕೇರಳಕ್ಕೆ ಹೋಗಬೇಕಾಗಿತ್ತು . ಹಲವಾರು ದಿನಗಳ ಮೊದಲೇ ಇದು ತಿಳಿದಿದ್ದರೂ, ಇನ್ನೂ ಸಮಯ ಇದೆ ಅಂತ ನನ್ನಲೇ ನನಗೆ ಸಾಂತ್ವಾನ ಹೇಳಿಕೊಂಡು  ಬಂದಿದ್ದೆ. ಆದರೆ ಹೊರಡುವ ಆ ದಿನ ಬಂದೇ ಬಿಟ್ಟದ್ದು ಗೋಚರವಾಗಿದ್ದು ಬೆಳಿಗ್ಗೆ ಮೊಬೈಲ್ ನಲ್ಲಿ “I ll be leaving by 3pm today”  ಎಂಬ ಸಂದೇಶ ನೋಡಿದಾಗಲೇ.

ಏನೋ ಆತಂಕ , ಹೇಳಲಾಗದ ದುಖ , ಮತ್ತೊಂದೆಡೆ ಅವಳ career ಶುರುವಾಗುತ್ತಿದೆ ಎಂಬ ಸಂತಸ. ಆದರೆ ಇನ್ನೂ ಕನಿಷ್ಟ ಮೂರು ತಿಂಗಳವರೆಗೂ ಅವಳನ್ನು ನೋಡಲು ಸಾಧ್ಯವಿಲ್ಲ ಎಂಬ ಕಟು ಸತ್ಯ ನನ್ನನ್ನು ಕೊಲ್ಲುತ್ತಿತ್ತು.

Nostalgic moments  ಅನ್ನೋ ಹಾಗೆ ಶಾಲಾ ದಿವಸಗಳಿಂದ ಹಿಡಿದು ಅಂದಿನ ವರೆಗೆ ಒಟ್ಟಿಗೆ ಕಳೆದ ದಿನಗಳೆಲ್ಲವೂ ನೆನಪಾದವು .
ನಾವಿಬ್ಬರೂ ಜಗಳವಾಡಿದ ದಿನಗಳು, ಮತ್ತೆ ಎರಡೇ ಕ್ಷಣಗಳಲ್ಲಿ ನಕ್ಕು ಒಂದಾದ ಅದ್ಭುತ ನೆನಪುಗಳು, ಎಷ್ಟೋ ಸಲ possessivness ಉಂಟಾಗಿ ಭಾವುಕರಾದ ಸನ್ನಿವೇಶಗಳು , ಎಲ್ಲವೂ ಸರಪಳಿಯಂತೆ ನನ್ನ ಮನಸ್ಸನ್ನು ಸುತ್ತುವರಿದಿದ್ದವು. ಅದೇ ಸರಪಳಿಯಲ್ಲಿ ಅವಳನ್ನು ಕಟ್ಟಿ ಹಾಕಿ "ನನ್ನಿಂದ ದೂರ ಹೋಗದಿರು" ಎಂದು ಬಂಧಿಸಿ ನಿಲ್ಲಿಸಿಬಿಡೋಣ ಎನ್ನುವಷ್ಟು ಆವೇಶ .


ಆದರೆ ಯಾವುದನ್ನೂ ವ್ಯಕ್ತಪಡಿಸಿಕೊಳ್ಳದ ಅಸಹಾಯಕತೆ .
ಇವೆಲ್ಲವನ್ನೂ ಅವಳ ಮುಂದೆ ಹೇಳಿಕೊಂಡರೆ , ಅವಳನ್ನು ನಾನೇ ಬಲಹೀನಳನ್ನಾಗಿ ಮಾಡುತ್ತೇನೆ ಎಂಬ ಆತಂಕ .
ಎಲ್ಲ ಸಿದ್ಧತೆ ಮಾಡಿಕೊಂಡು ತನ್ನ ಪರಿವಾರದೊಂದಿಗೆ ಹೊರಟು ನಿಂತಿದ್ದ ಅವಳನ್ನು ನಾನು ಭೇಟಿಯಾಗಿದ್ದು ಬಸ್ ನಿಲ್ದಾಣದಲ್ಲಿ. ಅವಳಿಗೆ ಶುಭಾಶಯ ಹೇಳಲೆಂದು ಕೈಯಲ್ಲಿ ಉಡುಗೊರೆ ಹಿಡಿದುಕೊಂಡು ನಿಂತಿದ್ದೆ. ಜೊತೆಯಲ್ಲಿ ಚಾಕೊಲೇಟ್ ಕೂಡ.

ಎನನ್ನೂ ಹೇಳುವ ಧೈರ್ಯ ನನಗಿರಲಿಲ್ಲ. ಅಂತೆಯೇ ಅವಳೂ ಕೂಡ .
ಉಡುಗೊರೆ ನೀಡಿ "all the best" ಹೇಳಿದೆ...
ನನ್ನ ಕೈಯನ್ನು ಅವಳು ಗಟ್ಟಿಯಾಗಿ ಹಿಡಿದು, ಹೋಗಿಬರುತ್ತೇನೆ ಎಂದು ಕಣ್ಣಲ್ಲೆ ನುಡಿದಳು...
ಅಷ್ಟರಲ್ಲಿ ಬಸ್ಸು ಬಂದೇ ಬಿಟ್ಟಿತು.. ಹೊರಟೇ ಬಿಟ್ಟಳು..


ಬಹಳ ಸಮಯದವರೆಗೂ ಬಸ್ ಹೋದ ದಾರಿಯನ್ನೇ ದಿಟ್ಟಿಸಿ ನೋಡುತ್ತಿದ್ದೆ.
ನಂತರ ಮನೆಗೆ ವಾಪಸ್ ಬಂದೆ.

ಯಾರೊಡನೆಯೂ ಮಾತನಾಡಲು ಮನಸ್ಸಿರಲಿಲ್ಲ.. ಹೊರಗೆ ಬಂದು ಚಂದ್ರನನ್ನೇ ನೋಡುತ್ತ ಅವನಲ್ಲೆ ನನ್ನ ದುಃಖ ತೋಡಿಕೊಂಡೆ.

ನಮ್ಮ ಎಷ್ಟೋ ಸಂತೋಷಗಳಿಗೆ ಅವನು ಸಾಕ್ಷಿಯಾಗಿದ್ದ. ಬಹಳ ಇಷ್ಟವಾಗಿದ್ದ.
ಶಾಪಿಂಗ್ ನೆಪದಲ್ಲಿ ಮನೆಗೆ ಸ್ವಲ್ಪ ತಡವಾಗಿ ಬರುತ್ತಿದ್ದ ನಮ್ಮನ್ನು ಸದ್ದಿಲ್ಲದೇ ಎಚ್ಚರಿಸುತ್ತಿದ್ದ ಅವನು....
ಎಷ್ಟೋ evening walks ಗಳಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಿದ್ದ ಅವನು..

ದಿನವೆಲ್ಲ ಮಾತನಾಡಿದರೂ ಮುಗಿಯದ ನಮ್ಮ ಸಂಭಾಷಣೆಗೆ ಬೆಳದಿಂಗಳ ತಂಪು ಹೊತ್ತು ತಂದಿದ್ದ ಅವನು...

ಸಂಜೆಯಾದ ಕೂಡಲೆ ಉಪ್ಪರಿಗೆಯ ಮೇಲೆ ಗಂಟೆ ಗಟ್ಟಲೆ ಕುಳಿತು ಹರಟೆ  ಹೊಡೆಯುತ್ತಿದ್ದ ನಮಗೆ ಕಾವಲಿನಂತೆ ಇರುತ್ತಿದ್ದ ಅವನು.....


ಈಗ ನನ್ನನ್ನು ಅವನೊಡನೆ ಬಿಟ್ಟು, "ಬಾಳ ದಾರಿಯಲಿ ಏನೆ ಆದರೂ ಚಂದಿರ ಬರುವನು ನಮ್ಮ ಜೊತೆ" ಎನ್ನುತ್ತಲೇ  ನನ್ನ ಜೀವದ ಗೆಳತಿ

ಹೊರಟು ಹೋದಳು ……


ಎಲ್ಲೇ ಇರಲಿ, ಅವಳಿಗೆ ನನ್ನ ಶುಭಾಶಯಗಳು.
.





Friday, 27 January 2012

ಬಾಳ ದಾರಿಯಲಿ ಏನೆ ಆದರೂ ಚಂದಿರ ಬರುವನು ನಮ್ಮಜೊತೆ(೧)






ಮನೆಯ ಹೊರಗಡೆ ನಿಂತು ಒಮ್ಮೆ ಆಕಾಶದ ಕಡೆ ನೋಡಿದ ನನಗೆ
ಹೀಗನಿಸಿತು.

ತಿಳಿ ಕತ್ತಲಿನ ಎತ್ತರದ ಬಾನು
ಮಿನು ಮಿನುಗು ನಕ್ಷತ್ರ
ಜೊಕಾಲಿಯಲ್ಲಿ ಮಲಗಿ
ಆಗಸವ ನೋಡುವಾಸೆ ಕಣ್ಣಿಗೆ
ಮಾಯದಂಥ ನಿದ್ರೆ
ತರಿಸುವ ಜೋಗುಳ
ಹಾಡುವವರಿಲ್ಲ ಎಂಬ ಕಳವಳ
ಚಿಂತೆ ಇಲ್ಲ ಇದಾವುದೂ ಇಲ್ಲದಿದ್ದರೂ
ಒಮ್ಮೆ ನಿನ್ನನ್ನು ನೆನೆದರೆ ಮನದಲ್ಲಿ ತುಂತುರು
ತಂಪು ತರುವ ಕಲೆಗಾರ
ಪೂರ್ಣ ಚಂದ್ರ ನೀನು
ಶುಭ ರಾತ್ರಿ ಹೇಳುವೆ
ಕೋ ಈ ಕಾವ್ಯದ ಜೇನು......

ಯಾಕೋ  ಗೊತ್ತಿಲ್ಲ .ಯೋಚನೆಗಳು ಬರೋದೇ ಈ ಬೆಳದಿಂಗಳ ಇರುಳಿನ ಸಮಯದಲ್ಲಿ ಅನ್ಸುತ್ತೆ.

ಯಾವತ್ತೂ ವಿಶೇಷ ಅನ್ನಿಸ್ದೆ ಇರೋ ಎಷ್ಟೋ ವಿಶಯಗಳು
ದಿಢೀರ್ ಅಂತ ಯಾಕೊ ಇಷ್ತ ಆಗ್ಬಿಡುತ್ತೆ..

ಇವತ್ತು ಹಾಗೆ ವಿಶೇಷ ಅಂತ ಅನ್ಸಿದ್ದು ಈ ನಮ್ಮ "ಶಶಾಂಕ"
ಅದೂ ಈ ಬೆಂಗಳೂರು ನಗರದ ದೊಡ್ಡ ದೊಡ್ಡ ಕಟ್ಟಡಗಳ ಮಧ್ಯೆ ಚಂದ್ರನನ್ನ
ಹುಡುಕೋದು ಕೂಡ ಕಷ್ಟ ..


ಓ ಇದು ಯಾವುದೊ ಊಹಾ ಲೋಕದ ಸಿಲ್ಲಿ ಊಹೆ ಅಂತ ಅನಿಸಿದ್ರೂ
ಅವ್ನಿಗು ನನಗೂ ಅದೇನೋ silent conversation…



ಆ silent conversation ಏನು ಅಂತ ಮುಂದಿನ ಸಂಚಿಕೆಯಲ್ಲಿ ಹೇಳ್ತೀನಿ..