Sunday 10 March 2013

ಒಮ್ಮೆ ಭೇಟಿ ಕೊಟ್ಟೆ ನನ್ನ ನೆನಪಿನ ತಾಣಕ್ಕೆ .....

ಬಂದೇ ಬಿಟ್ಟಿತು ಶನಿವಾರ. ಹಿಂದಿನ ದಿನವೇ ಮಾತನಾಡಿಕೊಂಡಂತೆ ,ಗೆಳತಿ ಭವ್ಯಳೊಂದಿಗೆ ನಾನು ಪಿಯು ಓದಿದ್ದ ಕಾಲೇಜಿಗೆ ಹೋಗಲು ಸಿದ್ಧಳಾದೆನು. ನಾವಿಬ್ಬರು ಅಲ್ಲಿಯೇ ಓದಿದ್ದು, ನಮ್ಮ ಗೆಳೆತನವಾದದ್ದು. ಉತ್ಸಾಹ ತುಂಬಿದ ಮನಸ್ಸು , ೩ ವರ್ಷಗಳ ನಂತರ ನಮ್ಮ  ನೆಚ್ಚಿನ ಉಪನ್ಯಾಸಕರನ್ನು ಭೇಟಿಯಾಗುವ ಸಂಭ್ರಮ .

     ನಮ್ಮೊಳಗೆ ಮತ್ತೆ ಆ ಹದಿ ಹರೆಯದ ಹುಡುಗಿ ಆವಾಹನೆ ಆಗಿಯೇ ಬಿಟ್ಟಳು. "ನಾನೀಗ ಬೆಳೆದು ನಿಂತು, ಶಿಕ್ಷಣ ಮುಗುಸಿ , ನೌಕರಿ ಮಾಡುತ್ತಿದ್ದೇನೆ" ಎಂದು ನಿಷ್ಠುರವಾಗಿ ನಮ್ಮಲ್ಲೇ ನಾವು ನುಡಿದೆವಾದರು, ಅವಳು ಅದ್ಯಾವುದಕ್ಕೂ ಕಿವಿಗೊಡದೆ, ತನ್ನದೇ ಮುಗ್ಢ ನಗು ಬೀರುತ್ತ, ನಮ್ಮ ಗಂಭೀರತೆಯನ್ನು ಗೇಲಿ ಮಾಡುತ್ತ, ಅಣಕಿಸಿದಳು. ಕಾಲೇಜಿಗೆ ಭೇಟಿ ಕೊಡುವ ದಿನಗಳಲ್ಲಷ್ಟೆ ಅವಳಿಗೆ ಈ ಸಂಭ್ರಮ ಎಂದು ಕೊಂಡ ನಾವು, ಅವಳನ್ನು ನಮ್ಮ ಮನ, ಉತ್ಸಾಹ , ಆಲೋಚನೆಗಳಲ್ಲಿ ತುಂಬಿಕೊಂಡು , ಹೊರಟೇ ಬಿಟ್ಟೆವು.

    ನಾವು ಪ್ರಸ್ತುತತೆಯನ್ನು ಮರೆತು, ಅವಳೇ ಆಗಿ, ಅಂದರೆ ಪಿಯು ಓದುತ್ತಿದ್ದ ವಿದ್ಯಾರ್ಥಿನಿಯರಾಗಿ ಬದಲಾಗಿಬಿಟ್ಟೆವು,
   
    ದಾರಿಯುದ್ದಕ್ಕೂ ,ಹಳೆಯ ದಿನಗಳ ನೆನಪನ್ನು ಹೊತ್ತು ಸಾಗಿದ ನಮಗೆ, ಮೇಲ್ಸೇತುವೆ ಕಂಡಿತು .ಕೂಡಲೆ ಎಡೆಬಿಡದೆ ನಗುತ್ತಿದ್ದ, ಮಾತನಾಡುತ್ತಿದ್ದ ನಾವು, ಇನ್ನು ಕಾಲೇಜು ಸಮೀಪಿಸುತ್ತಿದೆ ಎಂದು, ಬಲು ಕಷ್ಟದಿಂದ ಒಂದಿಷ್ಟು ಗಾಂಭೀರ್ಯತೆಯನ್ನು ಮೈದುಂಬಿಸಿಕೊಂಡು ನಡೆದೆವು. ಕಾಲೇಜಿನ ಪ್ರವೇಶ ದ್ವಾರದಲ್ಲಿ ಪಾಸ್ ಪಡೆದು
ನಡೆದ ನಾವು, ನಮ್ಮ ಮೆಚ್ಚ್ಹಿನ ಗಣಿತ ಉಪನ್ಯಾಸಕರು ಹಾಗು ಉಪಾಧ್ಯಾಯರೂ ಆದ ಶ್ರೀಮತಿ ಲಕ್ಷ್ಮೀ ಕಾಂತಮ್ಮ ರವರ ಬಳಿಗೆ ಹೋದೆವು.
ಪ್ರೀತಿಯ ಆದರ , ಅವರ ನಗುವಿನಲ್ಲಿ ಎದ್ದು ತೋರುತ್ತಿತ್ತು.

  ಭವ್ಯಳ ಈಗಿನ ಉಡುಗೆಯಲ್ಲಿ ಬಹಳಷ್ಟು ಬದಲಾವಣೆ ಇಲ್ಲದೆ ಇದ್ದರೂ, ನನ್ನನ್ನು ನೋಡಿದವರಿಗೆ ಸಹಜವಾಗಿಯೇ ಬಹಳ ಬದಲಾದಂತೆ ಅನಿಸುತ್ತದೆ. ಅಂದಹಾಗೆ, ನಾ ಕಾಲೇಜಿನಲ್ಲಿ ಓದುತ್ತಿದ್ದಾಗ ಹೇಗಿದ್ದೆ ಎಂದು ಕೇಳ್ತೀರ? ನೀಳವಾದ ಎರಡು ಜಡೆಯನ್ನು ಪ್ರತಿ ನಿತ್ಯವೂ ಹಾಕಿಕೊಂಡು ಬರುತ್ತಿದ್ದ ಅದೇ ಪುಟಾಣಿ ಹುಡುಗಿ ನಾನು. ಯಾರಿಗಾದರು ಕಾಲೇಜಿನಲ್ಲಿ ನನ್ನ ಹೆಸರು ತಿಳಿಯದಿದ್ದರೂ , ಅದೇ ಆ ಎರಡು ಜಡೆಯ ಹುಡುಗಿ ಅಂತ ಹೇಳಿದ್ರೆ ಸಾಕು ಓ ಆ ಹುಡುಗಿನಾ ಎಂದು ಉದ್ಗಾರ ತೆಗೆಯುತ್ತ ನನ್ನನ್ನು ಗುರುತಿಸುತ್ತಿದ್ದ ಜನರೆ ಹೆಚ್ಚು. ಹಾಗಿದ್ದ ನಾನು , ಇಂದು ಕೂದಲನ್ನು ತುಂಡಾಗಿಸಿ , ಜಡೆ ಹಣೆಯದೆ, ಒಂದಷ್ಟು ಮುಗ್ಧತೆಯನ್ನು ದಾಟಿ ಬೆಳೆದು ನಿನ್ತವಳಂತೆ ಕಂಡದ್ದು ಅವರಿಗೆ ಸಂತಸ ಹಾಗು ಕೊಂಚ  ಆಶ್ಚರ್ಯವನ್ನು ಉಂಟು ಮಾಡಿತ್ತು.

  ಮತ್ತದೇ ವಿಧ್ಯಾರ್ಥಿಗಳ ಧಾಟಿಯಲ್ಲಿ, ಪ್ರತಿ ಸಾಲಿನ ಕೊನೆಗು "ಮ್ಯಾಂ ", "ಯೆಸ್ ಮ್ಯಾಂ", ಎನ್ನುತ್ತ ಸಾಕಷ್ಟು ಹರಟಿದೆವು.ನಮ್ಮ ಉದ್ಯೋಗದ ಬಗ್ಗೆ, ಅವರ ಪಾಠಗಳ ಬಗ್ಗೆ,  ವಿಗ್ನಾನ, ಶಿಕ್ಷಣ ಪದ್ಧತಿ, ಹೀಗೆ ನಮ್ಮ ಮಾತಿನ ಬಲೆಗೆ ಹಲವಾರು ವಿಷಯಗಳು ಸಿಕ್ಕು ಪಾವನವಾದವು. ಹಹ್ಹಹ್ಹಾ.. ನಮ್ಮ "ಮ್ಯಾಂ"ನ ಪ್ರತಿ ಮಾತಿನಲ್ಲೂ ಅದೇ ಉತ್ತೇಜನ , ಪ್ರೀತಿ, ಮಾರ್ಗದರ್ಶಕತೆ, ಲವಲವಿಕೆ, ಹಾರೈಕೆ, ಎಲ್ಲವೂ ತುಂಬಿತ್ತು. ಅಂದು ಅಮ್ಮನ ಸೆರಗಿನ ಹಿಂದೆ ಸುತ್ತುವ ಮಕ್ಕಳಂತೆ ಉಪನ್ಯಾಸಕರ ಹಿಂದೆ ಸುತ್ತುತ್ತಿದ್ದ ನಮ್ಮ ಮುಗ್ಧತೆ,ತುಂಟತನ, ಓದಿನಲ್ಲಿ ಶ್ರದ್ಧೆ, ಒಂದಿಷ್ಟು ಪಠ್ಯೇತ್ತರ ವಿಷಯಗಳಲ್ಲಿ ಆಸಕ್ತಿ , ಇವೆಲ್ಲವೂ ನಮ್ಮನ್ನು ಅವರಿಗೆ ಇನ್ನಷ್ಟು ಹತ್ತಿರ ತಂದಿತ್ತು.
ಹಳೆಯ ದಿನಗಳನ್ನು ಮೆಲಕು ಹಾಕುತ್ತ ಮಾತು ಮುಂದುವರೆಸಿದ ನಾವು, ಅವರಿಗಾಗಿ ತಂದ ಸಿಹಿಯನ್ನು ಕೊಟ್ಟು, ನಮ್ಮ ಅಚ್ಚು ಮೆಚ್ಚಿನ ಕನ್ನಡ ವಿಭಾಗಕ್ಕೆ ಹೊರಟೆವು.

ಕನ್ನಡ ಹಾಗು ಹಿಂದಿ ವಿಭಾಗಗಳು ಒಂದೇ ಕೊಠಡಿಯಲ್ಲಿ ಇದ್ದ ಕಾರಣ, ನಮಗೆ ಆ ವಿಭಾಗದ ಉಪನ್ಯಾಸಕರು ಪರಿಚಯವಿದ್ದಾರೆ.
ನಾವು ಕೊಠಡಿಯನ್ನು ಪ್ರವೇಶ ಮಾಡಿದ್ದೇ , ಬಹಳ ಆತ್ಮೀಯರು , ನಮ್ಮ ತಂದೆ ತಾಯಿಯಂತೆಯೇ ನಮಗೆ ಮಾರ್ಗ ದರ್ಶನ , ಉತ್ತೇಜನ ನೀಡುತ್ತಿದ್ದ ಕನ್ನಡ ಉಪನ್ಯಾಸಕರ ಬಳಿಗೆ. ನಮಗಾಗಿ ತಮ್ಮ ಅಂದಿನ ಮುಖ್ಯ ಕೆಲಸಗಳನ್ನು ಬದಿಗಿಟ್ಟು , ಕೆಲ ಸಮಯ ನಮ್ಮೊಡನೆ ಭಾವಪೂರ್ಣವಾಗಿ ಮಾತನಾಡಿ, ನಾವೀಗ ಉದ್ಯೋಗಸ್ಥರಾಗಿರುವದನ್ನು ಕಂಡು ಹರುಷದಿಂದ ಸಿಹಿ ಮಾತುಗಳನ್ನಾಡಿದರು ನಮ್ಮ ಉಪಾಧ್ಯಾಯರಾದ ಶ್ರೀ ಮಹಾಲಿಂಗಯ್ಯನವರು. ಅವರಂತೆಯೆ, ಅಲ್ಲಿನ ಎಲ್ಲ
ಉಪನ್ಯಾಸಕರೂ ಪ್ರೀತಿಯಿಂದ ಮಾತನಾಡಿಸಿದರು. ಆದರೆ ನಮ್ಮ ಮತ್ತೋರ್ವ ಉಪನ್ಯಾಸಕರಾದ ನಾಗರಾಜಯ್ಯನವರು ಸಧ್ಯಕ್ಕೆ ಅಲ್ಲಿ ಇಲ್ಲದಿರುವುದನ್ನು ಕಂಡು ಬೇಸರವೂ , ನಿರಾಶೆಯೂ ಆಯಿತು. ನಮ್ಮ ಹಳೆಗನ್ನಡ ಪದ್ಯಗಳನ್ನು ರಾಗ ಪೂರ್ಣವಾಗಿ ಭಾವ ತುಂಬಿ ಹಾಡುತ್ತಿದ್ದ ಅವರು, ಭಾವಜೀವಿ. ಮತ್ತೆಂದಾದರೂ ಅವರನ್ನು ಭೇಟಿಯಾಗುವ ಸದಾವಕಾಶ ಒದಗಿ ಬರಲಿ ಎಂದು ನಮ್ಮಲ್ಲೆ ಸನ್ನೆ ಮಾಡಿಕೊಂಡೆವು.

ಅಲ್ಲಿನ ಒಂದು ಘಂಟೆಯ ಅವರೊಂದಿಗಿನ ಒಡನಾಟ ನಮ್ಮಲ್ಲಿ ಹೊಸದೊಂದು ಹುರುಪು,ಜೀವನೋತ್ಸಾಹ, ಕಲಿಕೆ, ಸಂಭ್ರಮ, ಇವುಗಳನ್ನು ಚಿಮ್ಮಿಸುವ ಕಾರಂಜಿಯನ್ನು ಸೃಷ್ಟಿ ಮಾಡಿತ್ತು. ಇದೆಲ್ಲವೂ ಮುಗಿಯುವುದರೊಳಗೆ ಮಧ್ಯಾಹ್ನವಾಗಿತ್ತು. ಹಸಿವಾಗಿತ್ತು . ಅಲ್ಲಿ ಎಲ್ಲರಿಗೂ ಶುಭ ಹಾರೈಸಿ ಹೊರಟ ನಾವು, ಸೀದಾ ಹೋದದ್ದು ಐಯ್ಯಂಗಾರ್ ಬೇಕರಿಗೆ. ಅದು ನಮ್ಮ ಅಚ್ಚು ಮೆಚ್ಚಿನ ತಿನಿಸಿನ ಬೇಕರಿ. ಗೊರ್ ಗೊರ್ ಎಂದು ಸದ್ದು ಮಾಡುತ್ತಿದ್ದ ಹೊಟ್ಟೆರಾಯನಿಗೆ ಆಲೂ ಬನ್, ಚಾಕೊಲೇಟ್ ಕೇಕ್, ಆಪಲ್ ಕೇಕ್ ಎಲ್ಲವನ್ನು ತುಂಬಿಸಿ, ತಂಪಾಗಿಸಿದೆವು.ಅಲ್ಲೇ ನಿಂತು ನಮ್ಮ ಕಾಲೇಜಿನ ಕಟ್ಟಡವನ್ನು ದಿಟ್ಟಿಸಿ ನೋಡಿದೆವು.ನಾವು ಓಡಾಡಿದ ಮಹಡಿ, ಮೆಟ್ಟಿಲುಗಳು, ನಾವು ಕೂರುತ್ತಿದ್ದ ಕೊಠಡಿ, ಕುರ್ಚಿಗಳು, ಸಹಪಾಠಿಗಳು, ಸ್ನೇಹಿತರೊಂದಿಗಿನ  ದಿನಗಳು, ಎಲ್ಲವನ್ನೂ ನೆನೆದವು.

ಇಂತಹ ಸುಂದರ ನೆನಪುಗಳನ್ನು ಮತ್ತೊಮ್ಮೆ ಮೆಲಕು ಹಾಕುವ ಅವಕಾಶ ಮತ್ತೆ ಮತ್ತೆ ಒದಗಿ ಬರಲಿ ಎಂದು ಬಯಸುವೆ.

Saturday 28 January 2012

ಬಾಳ ದಾರಿಯಲಿ ಏನೆ ಆದರೂ ಚಂದಿರ ಬರುವನು ನಮ್ಮಜೊತೆ(2)


ಮಾತಿನಿಂದ ಕೂಡಿದ ಸಂಭಾಷಣೆ ಒಂಥರಾ ಆದರೆ, ಮೌನ ಸಂಭಾಷಣೆ
ಮಾತಾಡದೇನೆ ಎಲ್ಲವನ್ನೂ ಮತ್ತೊಬ್ಬರಿಗೆ ತಿಳಿಸುವ ವೈಶಿಷ್ಟ್ಯತೆ .ಆದರೆ ಅಂತಹ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ್ಮೀಯರಿದ್ದಾಗಲೇ ಅದು ಸಫಲ , ಸಾರ್ಥಕ.
Silent conversation ಅಂತ ಚಂದ್ರನ ಬಗ್ಗೆ ಹೇಳಿದ್ದು ಯಾಕೆ ಅಂದ್ರೆ, ಅಂದು ನನ್ನಲ್ಲಿ ಆಗ್ತಿದ್ದ ಭಾವಗಳ ಅಲ್ಲೋಲ ಕಲ್ಲೋಲ ಎಲ್ಲವನ್ನೂ ಆತ್ಮೀಯನಂತೆ ಆಲಿಸುತ್ತ , ನನ್ನ ಮೂಕ ವೇದನೆಗೆ ಮೌನವಾಗಿಯೇ ಸಾಂತ್ವಾನ ಹೇಳುತ್ತ ನೋಡುತ್ತಿದ್ದ ಚಂದ್ರ…

ಅಂದು ನನ್ನ ಆಪ್ತ ಗೆಳತಿ”, ಐಟಿ ಕಂಪನಿಯಲ್ಲಿ ತನ್ನ career ಶುರು ಮಾಡಲು ಹೊರಟ ದಿನ. ತರಬೇತಿಗಾಗಿ ಮೂರು ತಿಂಗಳು ಕೇರಳಕ್ಕೆ ಹೋಗಬೇಕಾಗಿತ್ತು . ಹಲವಾರು ದಿನಗಳ ಮೊದಲೇ ಇದು ತಿಳಿದಿದ್ದರೂ, ಇನ್ನೂ ಸಮಯ ಇದೆ ಅಂತ ನನ್ನಲೇ ನನಗೆ ಸಾಂತ್ವಾನ ಹೇಳಿಕೊಂಡು  ಬಂದಿದ್ದೆ. ಆದರೆ ಹೊರಡುವ ದಿನ ಬಂದೇ ಬಿಟ್ಟದ್ದು ಗೋಚರವಾಗಿದ್ದು ಬೆಳಿಗ್ಗೆ ಮೊಬೈಲ್ ನಲ್ಲಿ “I ll be leaving by 3pm today”  ಎಂಬ ಸಂದೇಶ ನೋಡಿದಾಗಲೇ.

ಏನೋ ಆತಂಕ , ಹೇಳಲಾಗದ ದುಖ , ಮತ್ತೊಂದೆಡೆ ಅವಳ career ಶುರುವಾಗುತ್ತಿದೆ ಎಂಬ ಸಂತಸ. ಆದರೆ ಇನ್ನೂ ಕನಿಷ್ಟ ಮೂರು ತಿಂಗಳವರೆಗೂ ಅವಳನ್ನು ನೋಡಲು ಸಾಧ್ಯವಿಲ್ಲ ಎಂಬ ಕಟು ಸತ್ಯ ನನ್ನನ್ನು ಕೊಲ್ಲುತ್ತಿತ್ತು.

Nostalgic moments  ಅನ್ನೋ ಹಾಗೆ ಶಾಲಾ ದಿವಸಗಳಿಂದ ಹಿಡಿದು ಅಂದಿನ ವರೆಗೆ ಒಟ್ಟಿಗೆ ಕಳೆದ ದಿನಗಳೆಲ್ಲವೂ ನೆನಪಾದವು .
ನಾವಿಬ್ಬರೂ ಜಗಳವಾಡಿದ ದಿನಗಳು, ಮತ್ತೆ ಎರಡೇ ಕ್ಷಣಗಳಲ್ಲಿ ನಕ್ಕು ಒಂದಾದ ಅದ್ಭುತ ನೆನಪುಗಳು, ಎಷ್ಟೋ ಸಲ possessivness ಉಂಟಾಗಿ ಭಾವುಕರಾದ ಸನ್ನಿವೇಶಗಳು , ಎಲ್ಲವೂ ಸರಪಳಿಯಂತೆ ನನ್ನ ಮನಸ್ಸನ್ನು ಸುತ್ತುವರಿದಿದ್ದವು. ಅದೇ ಸರಪಳಿಯಲ್ಲಿ ಅವಳನ್ನು ಕಟ್ಟಿ ಹಾಕಿ "ನನ್ನಿಂದ ದೂರ ಹೋಗದಿರು" ಎಂದು ಬಂಧಿಸಿ ನಿಲ್ಲಿಸಿಬಿಡೋಣ ಎನ್ನುವಷ್ಟು ಆವೇಶ .


ಆದರೆ ಯಾವುದನ್ನೂ ವ್ಯಕ್ತಪಡಿಸಿಕೊಳ್ಳದ ಅಸಹಾಯಕತೆ .
ಇವೆಲ್ಲವನ್ನೂ ಅವಳ ಮುಂದೆ ಹೇಳಿಕೊಂಡರೆ , ಅವಳನ್ನು ನಾನೇ ಬಲಹೀನಳನ್ನಾಗಿ ಮಾಡುತ್ತೇನೆ ಎಂಬ ಆತಂಕ .
ಎಲ್ಲ ಸಿದ್ಧತೆ ಮಾಡಿಕೊಂಡು ತನ್ನ ಪರಿವಾರದೊಂದಿಗೆ ಹೊರಟು ನಿಂತಿದ್ದ ಅವಳನ್ನು ನಾನು ಭೇಟಿಯಾಗಿದ್ದು ಬಸ್ ನಿಲ್ದಾಣದಲ್ಲಿ. ಅವಳಿಗೆ ಶುಭಾಶಯ ಹೇಳಲೆಂದು ಕೈಯಲ್ಲಿ ಉಡುಗೊರೆ ಹಿಡಿದುಕೊಂಡು ನಿಂತಿದ್ದೆ. ಜೊತೆಯಲ್ಲಿ ಚಾಕೊಲೇಟ್ ಕೂಡ.

ಎನನ್ನೂ ಹೇಳುವ ಧೈರ್ಯ ನನಗಿರಲಿಲ್ಲ. ಅಂತೆಯೇ ಅವಳೂ ಕೂಡ .
ಉಡುಗೊರೆ ನೀಡಿ "all the best" ಹೇಳಿದೆ...
ನನ್ನ ಕೈಯನ್ನು ಅವಳು ಗಟ್ಟಿಯಾಗಿ ಹಿಡಿದು, ಹೋಗಿಬರುತ್ತೇನೆ ಎಂದು ಕಣ್ಣಲ್ಲೆ ನುಡಿದಳು...
ಅಷ್ಟರಲ್ಲಿ ಬಸ್ಸು ಬಂದೇ ಬಿಟ್ಟಿತು.. ಹೊರಟೇ ಬಿಟ್ಟಳು..


ಬಹಳ ಸಮಯದವರೆಗೂ ಬಸ್ ಹೋದ ದಾರಿಯನ್ನೇ ದಿಟ್ಟಿಸಿ ನೋಡುತ್ತಿದ್ದೆ.
ನಂತರ ಮನೆಗೆ ವಾಪಸ್ ಬಂದೆ.

ಯಾರೊಡನೆಯೂ ಮಾತನಾಡಲು ಮನಸ್ಸಿರಲಿಲ್ಲ.. ಹೊರಗೆ ಬಂದು ಚಂದ್ರನನ್ನೇ ನೋಡುತ್ತ ಅವನಲ್ಲೆ ನನ್ನ ದುಃಖ ತೋಡಿಕೊಂಡೆ.

ನಮ್ಮ ಎಷ್ಟೋ ಸಂತೋಷಗಳಿಗೆ ಅವನು ಸಾಕ್ಷಿಯಾಗಿದ್ದ. ಬಹಳ ಇಷ್ಟವಾಗಿದ್ದ.
ಶಾಪಿಂಗ್ ನೆಪದಲ್ಲಿ ಮನೆಗೆ ಸ್ವಲ್ಪ ತಡವಾಗಿ ಬರುತ್ತಿದ್ದ ನಮ್ಮನ್ನು ಸದ್ದಿಲ್ಲದೇ ಎಚ್ಚರಿಸುತ್ತಿದ್ದ ಅವನು....
ಎಷ್ಟೋ evening walks ಗಳಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಿದ್ದ ಅವನು..

ದಿನವೆಲ್ಲ ಮಾತನಾಡಿದರೂ ಮುಗಿಯದ ನಮ್ಮ ಸಂಭಾಷಣೆಗೆ ಬೆಳದಿಂಗಳ ತಂಪು ಹೊತ್ತು ತಂದಿದ್ದ ಅವನು...

ಸಂಜೆಯಾದ ಕೂಡಲೆ ಉಪ್ಪರಿಗೆಯ ಮೇಲೆ ಗಂಟೆ ಗಟ್ಟಲೆ ಕುಳಿತು ಹರಟೆ  ಹೊಡೆಯುತ್ತಿದ್ದ ನಮಗೆ ಕಾವಲಿನಂತೆ ಇರುತ್ತಿದ್ದ ಅವನು.....


ಈಗ ನನ್ನನ್ನು ಅವನೊಡನೆ ಬಿಟ್ಟು, "ಬಾಳ ದಾರಿಯಲಿ ಏನೆ ಆದರೂ ಚಂದಿರ ಬರುವನು ನಮ್ಮ ಜೊತೆ" ಎನ್ನುತ್ತಲೇ  ನನ್ನ ಜೀವದ ಗೆಳತಿ

ಹೊರಟು ಹೋದಳು ……


ಎಲ್ಲೇ ಇರಲಿ, ಅವಳಿಗೆ ನನ್ನ ಶುಭಾಶಯಗಳು.
.





Friday 27 January 2012

ಬಾಳ ದಾರಿಯಲಿ ಏನೆ ಆದರೂ ಚಂದಿರ ಬರುವನು ನಮ್ಮಜೊತೆ(೧)






ಮನೆಯ ಹೊರಗಡೆ ನಿಂತು ಒಮ್ಮೆ ಆಕಾಶದ ಕಡೆ ನೋಡಿದ ನನಗೆ
ಹೀಗನಿಸಿತು.

ತಿಳಿ ಕತ್ತಲಿನ ಎತ್ತರದ ಬಾನು
ಮಿನು ಮಿನುಗು ನಕ್ಷತ್ರ
ಜೊಕಾಲಿಯಲ್ಲಿ ಮಲಗಿ
ಆಗಸವ ನೋಡುವಾಸೆ ಕಣ್ಣಿಗೆ
ಮಾಯದಂಥ ನಿದ್ರೆ
ತರಿಸುವ ಜೋಗುಳ
ಹಾಡುವವರಿಲ್ಲ ಎಂಬ ಕಳವಳ
ಚಿಂತೆ ಇಲ್ಲ ಇದಾವುದೂ ಇಲ್ಲದಿದ್ದರೂ
ಒಮ್ಮೆ ನಿನ್ನನ್ನು ನೆನೆದರೆ ಮನದಲ್ಲಿ ತುಂತುರು
ತಂಪು ತರುವ ಕಲೆಗಾರ
ಪೂರ್ಣ ಚಂದ್ರ ನೀನು
ಶುಭ ರಾತ್ರಿ ಹೇಳುವೆ
ಕೋ ಕಾವ್ಯದ ಜೇನು......

ಯಾಕೋ  ಗೊತ್ತಿಲ್ಲ .ಯೋಚನೆಗಳು ಬರೋದೇ ಬೆಳದಿಂಗಳ ಇರುಳಿನ ಸಮಯದಲ್ಲಿ ಅನ್ಸುತ್ತೆ.

ಯಾವತ್ತೂ ವಿಶೇಷ ಅನ್ನಿಸ್ದೆ ಇರೋ ಎಷ್ಟೋ ವಿಶಯಗಳು
ದಿಢೀರ್ ಅಂತ ಯಾಕೊ ಇಷ್ತ ಆಗ್ಬಿಡುತ್ತೆ..

ಇವತ್ತು ಹಾಗೆ ವಿಶೇಷ ಅಂತ ಅನ್ಸಿದ್ದು ನಮ್ಮ "ಶಶಾಂಕ"
ಅದೂ ಬೆಂಗಳೂರು ನಗರದ ದೊಡ್ಡ ದೊಡ್ಡ ಕಟ್ಟಡಗಳ ಮಧ್ಯೆ ಚಂದ್ರನನ್ನ
ಹುಡುಕೋದು ಕೂಡ ಕಷ್ಟ ..


ಇದು ಯಾವುದೊ ಊಹಾ ಲೋಕದ ಸಿಲ್ಲಿ ಊಹೆ ಅಂತ ಅನಿಸಿದ್ರೂ
ಅವ್ನಿಗು ನನಗೂ ಅದೇನೋ silent conversation…



silent conversation ಏನು ಅಂತ ಮುಂದಿನ ಸಂಚಿಕೆಯಲ್ಲಿ ಹೇಳ್ತೀನಿ..